ಪಾಲಿಂಗ್, ಲಿನಸ್ ಕಾರ್ಲ್
1901. ಅಮೆರಿಕ ದೇಶದ ರಸಾಯನ ವಿಜ್ಞಾನಿ. ಅಮೆರಿಕ ಸಂಯುಕ್ತ ಸಂಸ್ಥಾನಗಳ ಆರಗನ್ ಪ್ರಾಂತದ ಪೋರ್ಟ್‍ಲೆಂಡ್ ನಗರದಲ್ಲಿ 1901 ಫೆಬ್ರವರಿ 28ರಂದು ಜನನ. ಪ್ರಾಥಮಿಕ ಮತ್ತು ಪ್ರೌಢ ವ್ಯಾಸಂಗ ಅನುಕ್ರಮವಾಗಿ ಕಾಂಡನ್ ಪಟ್ಟಣ ಮತ್ತು ಪೋರ್ಟ್‍ಲೆಂಡ್ ನಗರದ ಸಾರ್ವಜನಿಕ ಶಾಲೆಗಳಲ್ಲಿ ನಡೆದುವು.

ಉನ್ನತ ವ್ಯಾಸಂಗಕ್ಕಾಗಿ ಓರಿಗನ್ ಸ್ಟೇಟ್ ಕಾಲೇಜು ಸೇರಿ (1917) ಐದು ವರ್ಷ ಅಲ್ಲಿ ವ್ಯಾಸಂಗ ಮುಂದುವರಿಸಿ ಅಲ್ಲಿ ರಾಸಾಯನಿಕ ಎಂಜಿನಿಯರಿಂಗ್‍ನಲ್ಲಿ ಬಿ.ಎಸ್. ಪದವಿ ಗಳಿಸಿದರು(1922). ಬಳಿಕ ಕ್ಯಾಲಿಫೋರ್ನಿಯ ತಾಂತ್ರಿಕ ಸಂಸ್ಥೆಯನ್ನು ಸೇರಿ ಅಲ್ಲಿ ಸಂಶೋಧನೆ ನಡೆಸಿ (1922-25) ರಸಾಯನವಿಜ್ಞಾನದಲ್ಲಿ ಪಿ.ಎಚ್‍ಡಿ. ಪದವಿ ಪಡೆದರು. ತರುವಾಯ ಅರ್ನಾಲ್ಡ್ ಸಾಮರ್‍ಫೆಲ್ಡ್, ಇರ್ವಿಂಗ್ ಶ್ರೇಡಿಂಗರ್ ಮತ್ತು ನೀಲ್ಸ್ ಬೋರ್ ಎಂಬ ಶ್ರೇಷ್ಠ ಭೌತವಿಜ್ಞಾನಿಗಳ ಜೊತೆ ಸಂಶೋಧನೆ ನಡೆಸಿ ಕ್ವಾಂಟಮ್ ಬಲವಿಜಾÐನದಲ್ಲಿ ಸಾಕಷ್ಟು ಪ್ರೌಢಿಮೆ ಗಳಿಸಿದರು.

ಆಣುಗಳ ರಚನೆಯ ರಾಸಾಯನಿಕ ಅಧ್ಯಯನ ಫಾಲಿಂಗ್ ಅವರ ಆಸಕ್ತ ಕ್ಷೇತ್ರ. ಈ ದಿಶೆಯಲ್ಲಿ ಇವರು ಲೆವಿಸ್ ಮತ್ತು ಲಾಂಗ್‍ಮ್ಯೂರ್ ಎಂಬವರ ಸಂಶೋಧನೆಗಳಿಂದ ತುಂಬ ಪ್ರಭಾವಿತರಾಗಿದ್ದರು. ರಾಸಾಯನಿಕ ಬಂಧಗಳು (ಕೆಮಿಕಲ್ ಬಾಂಡ್ಸ್) ಸಾಮಾನ್ಯ ಅಣುರಚನೆಯಲ್ಲಿಯಂತೆ ಬೃಹದಣುರಚನೆಯಲ್ಲಿಯೂ ಅವಶ್ಯವೆಂಬ ಅರಿವು ಇದ್ದುದರಿಂದ ಎಕ್ಸ್‍ಕಿರಣಗಳ ನಮನ ಪ್ರಯೋಗಗಳನ್ನು ನಡೆಸಿ ಅನೇಕ ಸ್ಪಟಿಕಗಳ ರಚನೆಯನ್ನು ಇವರು ವಿಶ್ಲೇಷಿಸಿದರು. ಅಣು ಹೆಚ್ಚು ಸಂಕೀರ್ಣವಾದಂತೆ ಎಕ್ಸ್‍ಕಿರಣಗಳ ನಮನ ಪ್ರಯೋಗದಿಂದ ಅದರ ರಚನೆಯ ಎಲ್ಲ ವಿವರಗಳನ್ನೂ ತಿಳಿಯುವುದು ಕಷ್ಟ.. ಆದ್ದರಿಂದ ಬಂಧಗಳ ಬಗ್ಗೆ ಅವುಗಳ ದಿಶೆ ಮತ್ತು ಪರಮಾಣು ದೂರ ಇವನ್ನು ತಿಳಿದು ಮಾದರಿಗಳನ್ನು ಸೃಷ್ಟಿಸಿ ಪ್ರಯೋಗದ ಫಲವನ್ನು ಗಳಿಸಿ ಅಳೆದ ಪ್ರಾಚಲಳೊಂದಿಗೆ ತಾಳೆ ನೋಡಬೇಕಾಗುತ್ತದೆ. ಪಾಲಿಂಗ್ ಈ ವಿಧಾನವನ್ನು ಅನುಸರಿಸಿ ಅನೇಕ ದೊಡ್ಡ ಅಣುಗಳ ರಚನೆಯನ್ನು ನಿರ್ಧರಿಸಿದ್ದೂ ಉಂಟು. ಒಂದು ದಶಕಕ್ಕೆ ಮೀರಿ ಪ್ರಯೋಗಗಳ ಫಲವನ್ನೆಲ್ಲ ಕ್ರೋಡೀಕರಿಸಿ ರಾಸಾಯನಿಕ ಬಂಧಗಳ ಪ್ರಕೃತಿ ಮತ್ತು ಅಣು ಮತ್ತು ಸ್ಫಟಿಕಗಳ ರಚನೆ ಎಂಬ ಒಂದು ಗ್ರಂಥವನ್ನು ಇವರು ಬರೆದರು. ಇದೊಂದು ಶ್ರೇಷ್ಠ ಆಕರ ಗ್ರಂಥ. 
1925 ರಲ್ಲಿ ಕ್ಯಾಂಟಮ್ ಬಲವಿಜ್ಞಾನ ರೂಪುಗೊಂಡಾದ ಬಳಿಕ ಅಣುರಚನೆಯ ಸಿದ್ದಾಂತಕ್ಕೆ ಹೊಸ ವಿಜ್ಞಾನದ ಸಮೀಕರಣಗಳೇ ಅಡಿಗಲ್ಲು ಎಂಬ ವಿಚಾರ ರಸಾಯನವಿಜ್ಞಾನಿಗಳಿಗೆ ಮನದಟ್ಟಾಯಿತು. 1927ರಲ್ಲಿ ಇ.ಯು.ಕಾಂಡನ್ ಮತ್ತು ಸ್ವತಂತ್ರವಾಗಿ ಹೈಟ್ಲರ್ ಮತ್ತು ಲಂಡನ್ ಎಂಬುವರು ಹೈಡ್ರೋಜನ್ ಅಣುವಿನ (ಊ2) ಹಂಚಿಕೊಂಡ ಎಲೆಕ್ಟ್ರಾನ್ ಜೋಡಿ ಬಂಧದ ಬಗ್ಗೆ ಕ್ವಾಂಟಮ್ ಬಲವಿಜ್ಞಾನದ ಸುದೀರ್ಘ ಚರ್ಚೆಯನ್ನು ಪ್ರಕಟಿಸಿದರು. ಇದು ರಾಸಾಯನಿಕ ಬಂಧನ (ಕೆಮಿಕಲ್ ಬಾಂಡಿಂಗ್) ಸಿದ್ಧಾಂತದ ಬೆಳೆವಣಿಗೆಗೆ ತುಂಬ ಸಹಕಾರಿಯಾಯಿತು. ಇಲ್ಲಿ ಪಾಲಿಂಗ್ ವಹಿಸಿದ ಪಾತ್ರ ಗಮನಾರ್ಹವಾಗಿತ್ತು. 

ಸ್ಥಾಯೀ ವಿದ್ಯುದಾಕರ್ಷಣೆಯೇ ಅಣು ನಿರ್ಮಾಣಕ್ಕೆ ಕಾರಣವೆಂಬ ಭಾವನೆಯನ್ನು 1819ರಲ್ಲಿ ಬರ್ಜಿಲಿಯಸ್ ಪ್ರತಿಪಾದಿಸಿದ. ಅಯಾನಿಕ್ ಬಂಧಗಳಿಗೆ ಸಂಬಂಧಿಸಿದಂತೆ (ಓಚಿ+ಅಟ-) ಇದು ಸರಿ. ಆದರೆ ಈ ಕಲ್ಪನೆಯಿಂದ ಎರಡು ಹೈಡ್ರೋಜನ್ ಪರಮಾಣುಗಳು ಕೂಡಿ ಹೇಗೆ ಒಂದು ಅಣು (ಊ2) ಆಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕುವುದಿಲ್ಲ. ಇದನ್ನು ವಿವರಿಸಲು ಎಲೆಕ್ಟ್ರಾನ್ ಜೋಡಿಯ ಹಂಚಿಕೆಯನ್ನೇ ಊಹಿಸಿಕೊಳ್ಳಬೇಕು. ಹೈಡ್ರೋಜನ್ನಿನ ಎರಡು ನ್ಯೂಕ್ಲಿಯಸ್ಸುಗಳ ನಡುವೆ ಎಲೆಕ್ಟ್ರಾನಿನ ಸಾಂದ್ರತೆ ಹೆಚ್ಚಾಗಿರುವಂತೆ ಹಂಚಿಕೆ ನಡೆದರೆ ಅವೆರಡೂ ಎಲೆಕ್ಟ್ರಾನುಗಳನ್ನು ಆಕರ್ಷಿಸುವುದರಿಂದ ಬಂಧನ ಏರ್ಪಡುತ್ತದೆ. ಇಂಥ ಸ್ಥಿತಿಗೆ ಸೈದ್ಧಾಂತಿಕ ಬೆಂಬಲವೂ ದೊರೆತಿರುವುದರಿಂದ ಈಗ ಯಾರು ಈ ಬಗ್ಗೆ ಅನುಮಾನ ವ್ಯಕ್ತಪಡಿಸುವುದಿಲ್ಲ. ಜೋಡಿ ಎಲೆಕ್ಟ್ರಾನುಗಳ ಹಂಚಿಕೆಯಿಂದ ಏರ್ಪಡುವ ಬಂಧವನ್ನು ಕೋವೇಲೆಂಟ್ ಬಂಧವೆಂದು ಕರೆಯುತ್ತಾರೆ. ಅಯಾನುಗಳ ನಡುವೆ ಸ್ಥಾಯೀ ವಿದ್ಯುದಾಕರ್ಷಣೆಯಿಂದ ಏರ್ಪಡುವ ಬಂಧಕ್ಕೆ ಅಯಾನಿಕ್ ಬಂಧವೆಂದು ಹೆಸರು. ಈ ವಿವರಣೆಯನ್ನು ಪ್ರತಿಪಾದಿಸುವಲ್ಲಿ ಪಾಲಿಂಗ್ ನಿರ್ಣಾಯಕ ಪಾತ್ರವಹಿಸಿದರು. 

ಒಂದು ಪರಮಾಣು ಒಂದು ಆಥವಾ ಹೆಚ್ಚು ಎಲೆಕ್ಟ್ರಾನ್ ಜೋಡಿಗಳನ್ನು ಹಂಚಿಕೊಂಡು ಬಂಧಗಳ ನಿರ್ಮಾಣಕ್ಕೆ ಅನುವಾಗಬಹುದು. ಪರಮಾಣುವೊಂದು ಹೊಂದಬಹುದಾದ ಕೋವೇಲೆಂಟ್ ಬಂಧಗಳ ಸಂಖ್ಯೆಗೆ ಆ ಅಣುವಿನ ಕೋವೇಲೆನ್ಸ್ ಎಂದು ಹೆಸರು. ಅಣುಗಳ ಸಮೀಕರಣದಲ್ಲಿ ಕೋವೇಲೆಂಟ್ ಬಂಧಗಳನ್ನು ಗೆರೆಗಳಿಂದ ಪ್ರತಿನಿಧಿಸುತ್ತಾರೆ. ಇಂಗಾಲದ ಪರಮಾಣು ನಾಲ್ಕು ಕೋವೇಲೆಂಟ್ ಬಂಧಗಳ ನಿರ್ಮಾಣಕ್ಕೆ ಅನುವಾಗಬಹುದು. ನಾಲ್ಕು ಬೇರೆ ಪರಮಾಣು ಬಂಧಿತವಾದಾಗ ಬಂಧಗಳ ದಿಶೆಗಳು ಸಾಮಾನ್ಯವಾಗಿ ಒಂದರಿಂದ ಇನ್ನೊಂದಕ್ಕೆ 1090 ಕೋನ ಏರ್ಪಡುವಂತೆ ಇರುತ್ತದೆ. ಮೂಲತಃ ಇಂಗಾಲದ ನಾಲ್ಕು ಕೋವೇಲೆಂಟ್ ಬಂಧಗಳನ್ನು ವಿವರಿಸುವ ಉದ್ದೇಶದಿಂದಲೇ ಅನುರಣನ ಸಿದ್ಧಾಂತ ಮಂಡಿತವಾದುದು. ಇದರ ಮಂಡನಕಾರ ಲಿನಸ್ ಪಾಲಿಂಗ್.

ಅನೇಕ ಸಂಯುಕ್ತ ವಸ್ತುಗಳ ಬಂಧ ಸಮೀಕರಣಗಳನ್ನು ಬರೆಯುವಾಗ ಸಮಾನಾರ್ಹತೆಯುಳ್ಳ ಒಂದಕ್ಕಿಂತ ಹೆಚ್ಚು ಮಾರ್ಗಗಳು ಇರುತ್ತವೆ. ಉದಾಹರಣೆಗೆ ಬೆನ್‍ಜೀóನಿನ ಬಂಧ ಸಮೀಕರಣವನ್ನು ಎರಡು ರೀತಿಯಲ್ಲಿ ಬರೆಯಬಹುದು. ಭೌತಸಾಕ್ಷಿಗಳು ಈ ಎರಡು ಬಂಧ ಸಮೀಕರಣಗಳಲ್ಲಿರುವ ಎಲ್ಲ ಆರು ಅ-ಅ ಬಂಧಗಳೂ ಸರಿ ಎಂದು ಹೇಳುತ್ತವೆ. ಆದ್ದರಿಂದ ಇವೆರಡೂ ಸರಿಯಾಗಿಯೇ ಇರಬೇಕು. ಕ್ವಾಂಟಮ್ ಬಲವಿಜ್ಞಾನದ ವಾದಗಳ ವಾಸ್ತವ ಸ್ಥಿತಿ ಸಾಧ್ಯವಿರುವ ಎರಡು ಬಂಧಗಳ ಮಿಶ್ರಣ ಎಂದು ಸಾಬೀತು ಮಾಡುತ್ತವೆ. ಅಂದರೆ ಅಂಥ ಅಣುಗಳ ರಚನೆ ಸಾಧ್ಯವಿರುವ ಏಕ ಮತ್ತು ದ್ವಯ ಬಂಧಗಳ ನಡುವೆ ಅನುವಾದಿಸುತ್ತದೆ ಎಂದ ಹಾಗಾಯಿತು. ಎರಡು ಅಥವಾ ಹೆಚ್ಚು ಬಂಧ ಸಮೀಕರಣಗಳನ್ನು ಬರೆಯಬಹುದಾದಂಥ ಎಲ್ಲಾ ಅಣುಗಳ ರಚನೆಯನ್ನೂ ವಿವರಿಸಲು ಈ ಸಿದ್ಧಾಂತ ನೆರವಾಗುತ್ತದೆ.

ಅಣುರಚನೆಯಲ್ಲಿದ್ದ ಆಸಕ್ತಿ ಪಾಲಿಂಗ್ ಆವರನ್ನು ಭೌತರಸಾಯನವಿಜ್ಞಾನದಿಂದ ಜೀವರಸಾಯನವಿಜ್ಞಾನದ ಕಡೆಗೆ ಎಳೆಯಿತು. ಇವರು ಪ್ರೋಟೀನ್‍ಗಳು ಮತ್ತು ಇವುಗಳ ಉಪಭಾಗಗಳಾದ ಅಮೈನೊ ಆಮ್ಲಗಳ ರಚನೆಯ ಅರಿವಿಗಾಗಿ ಕಾರ್ಯನಿರತರಾದರು. ಇದರ ಫಲವಾಗಿ 1950ರಲ್ಲಿ ಆರ್.ಬಿ.ಕೊರಿ ಅವರೊಡಗೂಡಿ ಅನೇಕ ಪ್ರೋಟೀನುಗಳ ರಚನೆಯನ್ನು ವಿವರಿಸಿದರು: ಅಲ್ಲದೆ ಮೊತ್ತಮೊದಲಿಗೆ ಮೂರು ಅಯಾನುಗಳ ವಿನ್ಯಾಸವನ್ನು ತೋರಿಸುವ ಒಂದು ಪ್ರೋಟೀನಿನ ಮಾದರಿಯನ್ನು ನಿರ್ಮಾಣ ಮಾಡಿದರು ಕೂಡ. ಇದರಿಂದ ಕೋಶಗಳ ರಚನೆಯ ಅಭ್ಯಾಸಕ್ಕೆ ತುಂಬ ಅನುಕೂಲವಾಯಿತು.

ರಕ್ತಕೋಶಗಳ ಕೆಲವು ವೈಪರೀತ್ಯಗಳನ್ನು ಪರಿಣಾಮಗಳನ್ನೂ ಕುರಿತಾಗಿ ಪಾಲಿಂಗ್ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಅಣುವಿನ ವೈಪರೀತ್ಯಗಳಿಗೂ ಅನುವಂಶೀಯತೆಗೂ ಇರುವ ಸಂಬಂಧವನ್ನು ಬುದ್ಧಿ ಹಿಂಜರಿತಕ್ಕೆ ಸಂಬಂಧಪಟ್ಟ ರಸಾಯನ ಮೂಲವನ್ನೂ ಅರಿವಳಿಕಗಳ ಕ್ರಿಯೆಯನ್ನು ಕುರಿತಾಗಿ ಇವರು ಅನೇಕ ಪ್ರಯೋಗಗಳನ್ನು ವಡೆಸಿದ್ದಾರೆ. 1970 ರಲ್ಲಿ ಇವರು ಪ್ರಕಟಿಸಿದ 'ಜೀವಸತ್ತ್ವ ಸಿ ಮತ್ತು ಸಾಮಾನ್ಯ ಶೀತ ಎಂಬ ಪುಸ್ತಕದಲ್ಲಿ ಈ ಜೀವಸತ್ತ್ವ ಸಿ ಮತ್ತ ಸಾಮಾನ್ಯ ಶೀತಕ್ಕೆ ಸಿದ್ಧೌಷಧಿ ಆಗಬಲ್ಲದೆಂದು ಪ್ರತಿಪಾದಿಸಿದ್ದಾರೆ.

ಪರಮಾಣುಬಾಂಬಿನ ಹತ್ಯಾಕಾಂಡದಿಂದ (1945) ನೊಂದ ಪಾಲಿಂಗ್ ಕಟ್ಟಾ ಶಾಂತಿವಾದಿಯಾದರು. 1946ರಲ್ಲಿ ಐನ್‍ಸ್ಟೈನರ ಸಲಹೆಯಂತೆ ಪಾಲಿಂಗ್ ಪರಮಾಣು ವಿಜ್ಞಾನಿಗಳ ತುರ್ತು ಸಮಿತಿಯನ್ನು ರಚಿಸಿದರು. ಈ ಸಮಿತಿಗೆ ಐನ್‍ಸ್ಟೈನರು ಅಧ್ಯಕ್ಷರಾಗಿದ್ದರು.

ಪರಮಾಣು ಶಕ್ತಿ ನಿಷೇಧ ಈ ಸಮಿತಿಯ ಪ್ರಮುಖೋದ್ದೇಶವಾಗಿತ್ತು. ಹೈಡ್ರೋಜನ್ ಬಾಂಬ್ ತಯಾರಿಕೆಯ ವಿರುದ್ಧ ಪಾಲಿಂಗ್ ಆಂದೋಲನ ಹೂಡಿದರು. ಬಾಂಬಿನ ವಿಧ್ವಂಸಕ ಶಕ್ತಿಯನ್ನು ಜನರಿಗೆ ಪರಿಚಯ ಮಾಡಿಕೊಡಲು ಅನೇಕ ಲೇಖನಗಳನ್ನು ಬರೆದು ಪ್ರಕಟಿಸಿದರು. ದೇಶ ದೇಶ ಸುತ್ತಿ ಪ್ರಚಾರೋಪನ್ಯಾಸಗಳನ್ನು ಕೊಟ್ಟರು. ಹೈಡ್ರೋಜನ್ ಬಾಂಬಿನ ತಯಾರಿಕೆಯನ್ನು ವಿರೋಧಿಸಿ ಇವರು 1950ರ ಫೆಬ್ರವರಿ 13ರಂದು ನ್ಯೂಯಾರ್ಕಿನ ಕಾರ್ನೀಜಿ ಸಭಾಂಗಣದಲ್ಲಿ ಮಾಡಿದ ಭಾಷಣ ಐತಿಹಾಸಿಕ ಮಹತ್ವವುಳ್ಳದ್ದು. ಆದರೆ ಪ್ರಪಂಚದ ಪ್ರಬಲ ರಾಷ್ಟ್ರಗಳಾದ ಅಮೆರಿಕ ಮತ್ತು ರಷ್ಯಗಳ ಮೇಲೆ ಇದೇನೂ ಪ್ರಭಾವ ಬೀರಿದಂತೆ ತೋರಲಿಲ್ಲ. ಪರಮಾಣು ಮತ್ತು ಹೈಡ್ರೋಜನ್ ಬಾಂಬುಗಳ ತಯಾರಿಕೆಯ ವಿರುದ್ಧ ಹೋರಾಡುವ ಕಾಲದಲ್ಲೇ ಪಾಲಿಂಗ್ ಹೆಸರು ಜನಪ್ರಿಯವಾದದ್ದು. ಅವರು ಲೆಕ್ಕ ಹಾಕಿ ಈ ಬಾಂಬುಗಳಿಂದ ಆಗುವ ಅನಾಹುತವನ್ನು ಜನರಿಗೆ ತಿಳಿಸಿದರು. ವಾಷಿಂಗ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿಕಿರಣದ ದುಷ್ಪರಿಣಾಮಗಳನ್ನು ಕುರಿತು 1957 ಮೇ 15ರಂದು ಮಾತಾಡಿದರು. ಆ ಭಾಷಣವನ್ನೇ ಒಂದು ಪ್ರಮಾಣಪತ್ರವಾಗಿ ಮಾರ್ಪಡಿಸಿ ಅದಕ್ಕೆ ಅಮೆರಿಕ ಮತ್ತು ಬೇರೆ ದೇಶಗಳ ವಿಜ್ಞಾನಿಗಳ ಸಹಿ ಪಡೆದರು. ಒಟ್ಟು 11,021 ಮಂದಿ ವಿಜ್ಞಾನಿಗಳ ಸಹಿ ದೊರೆಯಿತು. ಇದನ್ನು ಅವರು ಅಂತಾರಾಷ್ಟ್ರೀಯ ಸಂಸ್ಥೆಯ ಆಗಿನ ಪ್ರಧಾನ ಕಾರ್ಯದರ್ಶಿ ಡಾಗ್ ಹ್ಯಾಮರ್‍ಶೆಲ್ಡ್ ಅವರಿಗೆ ಒಪ್ಪಿಸಿದರು. ಈ ಪ್ರಮಾಣಪತ್ರದ ಪ್ರಭಾವ ನೇರವಾಗಿ ತಟ್ಟದೇ ಹೋದರೂ 1958ರಲ್ಲಿ ರಷ್ಯ ತನ್ನಷ್ಟಕ್ಕೆ ತಾನು ನ್ಯೂಕ್ಲಿಯರ್ ಸ್ಪೋಟಗಳನ್ನು ನಿಲ್ಲಿಸಿತು. ಪಾಲಿಂಗ್ 11.021 ಸಹಿಗಳನ್ನು ಸಂಗ್ರಹಿಸಿದ್ದು ಹೇಗೆ ಎಂದು ತಿಳಿಯಲು ಅಮೆರಿಕದ ಸೆನೆಟ್ ಸೆಲೆಕ್ಟ್ ಕಮಿಟಿಯೊಂದು ಇವರನ್ನು ವಿಚಾರಣೆಗೆ ಗುರಿಮಾಡಿತು. ಸರ್ಕಾರಕ್ಕಿದ್ದ ಅನುಮಾನವೆಂದರೆ ಪಾಲಿಂಗ್ ಕಮ್ಯೂನಿಸ್ಟ್‍ರಲ್ಲಿ ಸಹಾನುಭೂತಿ ಉಳ್ಳವರೇ ಎಂಬುದು. 1960ರ ಜೂನ್ 21ರಂದು ಮೊದಲನೆಯ ವಿಚಾರಣೆ ನಡೆಯಿತು. ಅದೇ ವರ್ಷ ಅಕ್ಟೋಬರ್ 11ರಂದು ಎರಡನೆಯ ವಿಚಾರಣೆಯೂ ನಡೆಯಿತು. ಪಾಲಿಂಗ್ ತಾವು ಕಮ್ಯೂನಿಸ್ಟರಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು. ತನಗೆ ಪ್ರಚಾರ ಸ್ವಾತಂತ್ರ್ಯದಲ್ಲಿ ಅಚಲ ನಂಬಿಕೆ ಇದೆ ಎಂದು ಅವರು ಕಮಿಟಿಯ ಮುಂದೆ ಹೇಳಿದರು. ಪಾಲಿಂಗ್ 11,021 ಮಂದಿ ವಿಜ್ಞಾನಿಗಳ ಸಹಿ ಪಡೆಯಲು ನೆರವಾದವರ ಹೆಸರುಗಳನ್ನು ಬಹಿರಂಗಪಡಿಸಬೇಕೆಂದು ಕಮಿಟಿ ಕೇಳಿದಾಗ ಇವರು ಅದನ್ನು ನಿರಾಕರಿಸಿದರು. ಇದರಿಂದ ತಮಗೆ ಒದಗಬಹುದಾದಂಥ ಕಷ್ಟದ ಅರಿವು ಅವರಿಗಿತ್ತು. ಆದರೂ ಅವರು ತಮ್ಮ ನಿರ್ಧಾರಗಳಿಂದ ಕಿಂಚಿತ್ತೂ ಕದಲಲಿಲ್ಲ. ಮುಂದೆ ಪತ್ರಿಕೆಗಳ ಮತ್ತು ಸಾರ್ವಜನಿಕರ ಬೆಂಬಲ ಇವರಿಗೆ ದೊರೆಯಿತು.

ಪಾಲಿಂಗ್ ಅವರ ಪತ್ನಿ ಆವ ಹೆಲನ್ ಅವರೂ ಕೂಡ ಗಂಡನೊಂದಿಗೆ ಶಾಂತಿ ಸ್ಥಾಪನೆಗಾಗಿ ಒಟ್ಟು ಹೋರಾಟ ನಡೆಸಿದ್ದಾರೆ. ಸಾರ್ವಜನಿಕ ವೇದಿಕೆಗಳಲ್ಲಿ ಅನೇಕ ಭಾಷಣಗಳನ್ನೂ ಮಾಡಿ ನ್ಯೂಕ್ಲಿಯರ್ ಆಯುಧಗಳ ವಿರುದ್ಧ ಕೂಗೆಬ್ಬಿಸುವಂತೆ ಸ್ತ್ರೀಯರನ್ನು ಪ್ರಚೋದಿಸಿದ್ದಾರೆ. 

ಪ್ರಪಂಚ ಶಾಂತಿಸ್ಥಾಪನೆಗಾಗಿ ಕೆಲಸ ಮಾಡಲು ಪಾಲಿಂಗ್ ಕ್ಯಾಲಿಫೋರ್ನಿಯ ತಂತ್ರವಿದ್ಯಾಸಂಸ್ಥೆಯಲ್ಲಿದ್ದ ತಮ್ಮ ಹುದ್ದೆಯನ್ನು ತೊರೆದುಬಿಟ್ಟರು. ಅಷ್ಟರಲ್ಲಿ ಅವರು ಒಂದಾದ ಮೇಲೆ ಮತ್ತೋಂದು ಉನ್ನತ ಹುದ್ದೆಗಳಿಗೆ ಏರಿ ಗೇಟ್ಸ್ ಮತ್ತು ಕ್ರೆಲಿನ್ ಸಂಶೋಧನಾಲಯದ ಡೈರೆಕ್ಟರ್ ಆಗಿದ್ದರು. ಕ್ಯಾಲಿಫೋರ್ನಿಯ ತಂತ್ರ ವಿದ್ಯಾಸಂಸ್ಥೆಯನ್ನು ತೊರೆದ ಮೇಲೆ 1963ರಿಂದ 1967ರ ತನಕ ಸಾಂತಬಾರ್ಬರದಲ್ಲಿರುವ ಪ್ರಜಾಪ್ರಭುತ್ವ ಸಂಸ್ಥೆಗಳ ಕೇಂದ್ರದಲ್ಲಿ ನಿಂತರು. ಅಲ್ಲಿ ಪ್ರಪಂಚ ಶಾಂತಿಸ್ಥಾಪನೆಗಾಗಿ ಮಾಡಬೇಕಾದ ಕೆಲಸಗಳನ್ನು ಕುರಿತು ಚಿಂತಿಸಿದರು. ಸ್ಯಾನ್‍ಡಿಯಾಗೊದಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ 1967ರಿಂದ 1969ರ ಅವಧಿಯಲ್ಲಿ ರಸಾಯನವಿಜ್ಞಾನದ ಪ್ರೊಫೆಸರ್ ಆಗಿದ್ದರು. 1969 ರಿಂದ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.

ಪಾಲಿಂಗ್ ಅವರಿಗೆ ಎರಡು ಸಲ ನೊಬೆಲ್ ಪಾರಿತೋಷಿಕಗಳು ಲಭಿಸಿವೆ: 1954ರಲ್ಲಿ ಒಮ್ಮೆ ರಸಾಯನ ವಿಜ್ಞಾನದಲ್ಲಿ ಆಣವಿಕÀ ರಚನೆಯನ್ನು ಕುರಿತ ಸಂಶೋಧನೆಗಾಗಿ, 1963ರಲ್ಲಿ ಇನ್ನೊಮ್ಮೆ, ಪ್ರಪಂಚದಲ್ಲಿ ಶಾಂತಿ ಸ್ಥಾಪಿಸಲು ಮಾಡಿದ ಪ್ರಯತ್ನಗಳಿಗಾಗಿ. ಮೇರಿ ಕ್ಯೂರಿ ಮಾತ್ರ ಇವರಂತೆ ಎರಡು ಸಾರಿ ನೊಬೆಲ್ ಪಾರಿತೋóಷಿಕ ಪಡೆದವರು.     (ಎಸ್.ಎ.ಎಜ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ